ಕರುನಾಡು ಘರ್ಜನೆ ಸುದ್ದಿ ಬೆಳಗಾವಿ: ಬೆಳಗಾವಿಯ ಮಸೀದಿಯೊಂದರಲ್ಲಿ ಇಸ್ಲಾಂ ಧರ್ಮದ ಪವಿತ್ರ ಖುರಾನ್ ಪುಸ್ತಕ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಘಟನೆ ಬೆನ್ನಲ್ಲೇ ಪ್ರತಿಭಟನೆ, ಆಕ್ರೋಶ ಭುಗಿಲೆದ್ದಿದೆ.ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಎಂಬ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ ಎನ್ನಲಾಗಿದೆ.
ಈ ಮಸೀದಿಯಲ್ಲಿ ಎಂದಿನಂತೆ ಸೋಮವಾರ ಪ್ರಾರ್ಥನೆ ಮಾಡಲು ಮುಸಲ್ಮಾನರು ಆಗಮಿಸಿದ ವೇಳೆ ಕುರಾನ್, ಹದೀಸ್ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಹೀಗಾಗಿ ಪ್ರಾರ್ಥನೆ ಮುಗಿದ ಬಳಿಕ ಸುತ್ತಮುತ್ತ ಹುಡುಕಾಟ ನಡೆಸಿದಾಗ ಕುರಾನ್ ಮತ್ತು ಹದೀಸ್ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ.
ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಲ್ಲಡೆ ಸುದ್ದಿ ಹರಡುತ್ತಿದ್ದಂತೆ ಘಟನೆ ಖಂಡಿಸಿ ಬೆಳಗಾವಿ ನಗರದಲ್ಲಿ ಸಾವಿರಾರು ಮುಸ್ಲಿಂ ಮುಖಂಡರು, ಯುವಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪರಿಸ್ಥಿತಿ ಹದಗೆಡುತ್ತಿದ್ದಂತೆಯೇ ಬೆಳಗಾವಿ ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಮತ್ತು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು.