ಕರುನಾಡು ಘರ್ಜನೆ ಸುದ್ದಿ: ಬೆಂಗಳೂರು, ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ (RSS) ಪಥಸಂಚಲನ ವಿಚಾರ ಇದೀಗ ರಾಜ್ಯ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಪಥಸಂಚಲನಕ್ಕೆ ಅನುಮತಿ ಕೇಳಿದ ಆರ್‌ಎಸ್‌ಎಸ್ ಹಾಗೂ ವಿರೋಧ ವ್ಯಕ್ತಪಡಿಸಿದ ಇತರೆ ಸಂಘಟನೆಗಳ ಪೈಪೋಟಿಯಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಕಲಬುರಗಿ ಹೈ ಕೋರ್ಟ್ ನಲ್ಲಿ ವಿಚಾರಣೆ ಮತ್ತೆ ಮುಂದೂಡಿಯಾಗಿದೆ. ನವೆಂಬರ್ 7 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಧೀಶರಾದ ಎಮ್‌ಜಿಎಸ್ ಕಮಲ್ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರೆ. ಆರ್‌ಎಸ್‌ಎಸ್ ಪರ ಸತ್ಯನಾರಾಯಣ ಆಚಾರ್ಯ ಮತ್ತು ಅರುಣ ಶ್ಯಾಮ್ ವಾದ ಮಂಡಿಸಿದರು.
ಸಂಧಾನ ವಿಫಲ
ಚಿತ್ತಾಪುರದಲ್ಲಿ ನವೆಂಬರ್ 2 ರಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಆದರೆ ಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅಧಿಕಾರಿಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳ ನಡುವೆ ವಾಗ್ವಾದ ಉಂಟಾದ ಕಾರಣ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಹೈಕೋರ್ಟ್‌ನಲ್ಲಿ ವಿಚಾರಣೆ
ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಪ್ರಕರಣದ ಸಂವೇದನಶೀಲತೆಯನ್ನು ಗಮನಿಸಿ ಶಾಂತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವಂತೆ ಸೂಚಿಸಿದರು. ಹೀಗಾಗಿ ನವೆಂಬರ್ 5 ರಂದು ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 7 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.