ಕರುನಾಡು ಘರ್ಜನೆ ಸುದ್ದಿ ಗದಗ : ಕರ್ನಾಟಕದಲ್ಲಿ ಸಚಿವ ಸಂಪುಟ ಪುನರಚನೆ ಆದರೆ ಕಿತ್ತೂರ ಕರ್ನಾಟಕ ಭಾಗದ ಸ್ಥಳೀಯ ಮುಸ್ಲಿಂ ಶಾಸಕರಿಗೆ ಆದ್ಯತೆ ನೀಡಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ಎಸ್ ನಾಗರಕಟ್ಟೆ ಆಗ್ರಹಿಸಿದ್ದಾರೆ.
ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಕಳೆದ 70 ವರ್ಷಗಳಿಂದ ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಇಲ್ಲಿವರೆಗೂ ಸರಿಯಾದ ಪ್ರಾತಿನಿಧ್ಯ ಸಿಕ್ಕಿರುವುದಿಲ್ಲ. ಕೇವಲ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಶಾಸಕರಿಗೆ ವಿಶೇಷವಾಗಿ ದಕ್ಷಿಣ ಕರ್ನಾಟಕದ ಮುಸ್ಲಿಂ ಶಾಸಕರು ಸಂಪುಟದಲ್ಲಿ ಮಂತ್ರಿ ಆಗಿರುತ್ತಾರೆ.
ಈ ಕಾರಣದಿಂದ ಕಿತ್ತೂರ ಕರ್ನಾಟಕದ ಮುಸ್ಲಿಮರು ರಾಜಕೀಯವಾಗಿ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ರಾಜಕಾರಣಿಗಳನ್ನು ವ್ಯವಸ್ಥಿತವಾಗಿ ಮೂಲಿಗುಂಪು ಮಾಡುತ್ತಾ ಇಲ್ಲಿವರೆಗೂ ಬಂದಿರುತ್ತಾರೆ. ಹಾಗಾಗಿ ಇಲ್ಲಿಯವರೆಗೂ ಈ ಭಾಗದಲ್ಲಿ ಹೆಸರಾಂತ ಮುಸ್ಲಿಂ ರಾಜಕಾರಣಿಗಳು ಕಾಣಲು ಸಿಗೋದಿಲ್ಲ. ಈ ಭಾಗದ ಮುಸ್ಲಿಮರು ಕೇವಲ ಮತ ಬ್ಯಾಂಕ್ ಆಗಿ ಉಳಿದುಬಿಟ್ಟಿದ್ದಾರೆ. ಈ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕರೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಇಲ್ಲವಾದಲ್ಲಿ ನಾವು ಬೆಂಗಳೂರಿನ ನಾಯಕರಿಗೆ ಮನ್ನಣೆಯನ್ನು ಹಾಕಬೇಕಾಗುತ್ತದೆ. ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿಗೆ ಹೋಗುವಂತ ಸಂದರ್ಭ ನಿರ್ಮಾಣವಾಗಿ ಬಿಟ್ಟಿದೆ. ಆದಕಾರಣ ಕಾಂಗ್ರೆಸಿನ ವರಿಷ್ಠರು ಕಿತ್ತೂರ ಕರ್ನಾಟಕ ಭಾಗದಲ್ಲಿ ಹುಟ್ಟಿ ಬೆಳೆದಂತಹ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ಅಥವಾ ಕಿತ್ತೂರ ಕರ್ನಾಟಕ ಬಾಗದ ಹಿರಿಯ ಮುಸ್ಲಿಂ ಮುಖಂಡರಿಗೆ ಎಂ ಎಲ್ ಸಿ ಮಾಡಿಯಾದರೂ ಸಂಪುಟದಲ್ಲಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗದಗ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿಗಳಾದ ಎಂ ಡಿ ಜಾಫರ್ ಡಾಲಾಯತ್, ಆಸಿಫ್ ಜಮಾದಾರ್, ಅನೀಸ್ ಶೇಖ್, ಎಸ್ ಎಂ ಮುಲ್ಲಾ, ಮೊಹಮ್ಮದ್ ಯೂನುಸ್ ಬಾಗಲಕೋಟ, ಇಮ್ರಾನ್ ಬೆಟಗೇರಿ, ಅಬ್ದುಲ್ ರಜಾಕ ಧಾರವಾಡ, ಸಲೀಂ ಪಠಾಣ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು