ಕರುನಾಡು ಘರ್ಜುನೆ ಸುದ್ದಿ ಬೆಂಗಳೂರು: 2022ರಲ್ಲಿ ಜಾರಿಗೊಂಡು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಣೆಗೆ ನಿರ್ಬಂಧ ಹೇರಿದ್ದ ಸಮವಸ್ತ್ರ ಆದೇಶವನ್ನು ಹಿಂಪಡೆಯುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೇನ್ ಸ್ವಾಗತಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “2022ರ ವಿವಾದಾತ್ಮಕ ಆದೇಶವನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮವು ಸಂವಿಧಾನಾತ್ಮಕ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನ ಶಿಕ್ಷಣದ ಮೌಲ್ಯಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹಿಜಾಬ್ ನಿಷೇಧದಿಂದ ರಾಜ್ಯದ ಅನೇಕ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಮತ್ತು ಮನೋಭಾವದ ಮೇಲೆ ದುಷ್ಪರಿಣಾಮ ಉಂಟಾಗಿತ್ತು” ಎಂದು ತಿಳಿಸಿದ್ದಾರೆ.
“ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಅನ್ಯಾಯಕರ ನೀತಿಯನ್ನು ತಿದ್ದುಪಡಿ ಮಾಡಿ, ಸಮಾನತೆ, ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸಂವಿಧಾನಾತ್ಮಕ ಮೌಲ್ಯಗಳನ್ನು ಪುನಃ ದೃಢಪಡಿಸಿರುವ ಸರ್ಕಾರದ ಕ್ರಮ ಶ್ಲಾಘನೀಯವಾಗಿದೆ. ಶಿಕ್ಷಣವು ವಿದ್ಯಾರ್ಥಿಗಳನ್ನು ಒಗ್ಗೂಡಿಸಬೇಕೇ ಹೊರತು ಧರ್ಮ ಅಥವಾ ಗುರುತಿನ ಆಧಾರದ ಮೇಲೆ ವಿಭಜಿಸಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಈ ನಿರ್ಧಾರವು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದರ ಜೊತೆಗೆ, ಯಾವುದೇ ವಿದ್ಯಾರ್ಥಿಗೆ ಅವರ ಧಾರ್ಮಿಕ ನಂಬಿಕೆ ಅಥವಾ ಉಡುಪಿನ ಕಾರಣದಿಂದ ಶಿಕ್ಷಣ ನಿರಾಕರಿಸಲಾಗದ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” ಎಂದು ಅವರು ತಿಳಿಸಿದ್ದಾರೆ.