ಕರುನಾಡು ಘರ್ಜನೆ ಸುದ್ದಿ ಬೆಂಗಳೂರು : ಮನೆಯ ಬಾಲ್ಕನಿಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ದಂಪತಿ ‘ರೀಲ್ಸ್’ ಮಾಡಿ ತಾವಾಗೇ ಪೊಲೀಸ್ ಬಲೆಗೆ ಬಿದ್ದಿರುವ ಪ್ರಕರಣ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಎಸ್‌ಆರ್ ನಗರ 3ನೇ ಮೇನ್‌ನಲ್ಲಿ ವಾಸವಾಗಿರುವ ನೇಪಾಳ ಮೂಲದ ಗುರುಂಗ್ ಮತ್ತು ಆತನ ಪತ್ನಿ ಊರ್ಮಿಳಾ ಕುಮಾರಿ ಕಾನೂನು ಸಂಕಷ್ಟಕ್ಕೆ ಸಿಲುಕಿದವರು.
ಎಂಎಸ್‌ಆರ್ ನಗರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಸಾಗರ್-ಊರ್ಮಿಳಾ ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯ ಬಾಲ್ಕನಿಯಲ್ಲಿ ಸುಮಾರು 15 ಹೂ ಕುಂಡಗಳಲ್ಲಿ ಹೂ ಗಿಡ ಬೆಳೆಸಿರುವ ದಂಪತಿ, ಎರಡು ಪಾಟ್‌ಗಳಲ್ಲಿ ಗಾಂಜಾ ಗಿಡ ಬೆಳೆಸಿದ್ದರುರೀಲ್ಸ್ ಮಾಡುವ ಹವ್ಯಾಸ ಹೊಂದಿರುವ ಊರ್ಮಿಳಾ, ಇತ್ತೀಚೆಗೆ ತನ್ನ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಳು. ಈ ವೇಳೆ ಹೂ ಗಿಡಗಳನ್ನು ವಿಡಿಯೋ ಮಾಡಿದ್ದರು. ಈ ಹೂ ಗಿಡಗಳ ನಡುವೆ ಬೆಳೆದಿದ್ದ ಗಾಂಜಾ ಗಿಡಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋವನ್ನು ನೋಡಿದ ವ್ಯಕ್ತಿಯೊಬ್ಬ ಗಾಂಜಾ ಗಿಡ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಈ ಮಾಹಿತಿ ಆಧರಿಸಿ ಸದಾಶಿವನಗರ ಠಾಣೆ ಪೊಲೀಸರು ನ. 5ರಂದು ಊರ್ಮಿಳಾ ದಂಪತಿ ಮನೆ ಪತ್ತೆ ಹಚ್ಚಿದ್ದರು. ಪೊಲೀಸರ ದಾಳಿ ಊಹಿಸಿದ್ದ ದಂಪತಿ ಎರಡು ಗಾಂಜಾ ಗಿಡಗಳನ್ನು ಮುರಿದು ಡಸ್ಟ್‌ಬಿನ್‌ನಲ್ಲಿ ಎಸೆದಿದ್ದರು. ಶೋಧ ಕಾರ್ಯಾಚರಣೆ ನಡೆಸಿ ಸುಮಾರು 54 ಗ್ರಾಂ ತೂಕದ ಹಸಿ ಗಾಂಜಾ ಸೊಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಊರ್ಮಿಳಾ ಹಾಗೂ ಸಾಗರ್ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಲಾಗಿದೆ. ದಂಪತಿ ಯಾವ ಉದ್ದೇಶಕ್ಕೆ ಗಾಂಜಾ ಬೆಳೆದಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ