ಕರುನಾಡು ಘರ್ಜನೆ ಸುದ್ದಿ ಗದಗ : 1999-2000 ಅವಧಿಯಲ್ಲಿ ಕರ್ನಾಟಕ ರಾಜ್ಯಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿದ್ದ Y. ಭಾಸ್ಕರ್ ರಾವ್, 2013ರಲ್ಲಿ ರಾಜ್ಯ ಲೋಕಾಯುಕ್ತ ಸಂಸ್ಥೆಯ ಮುಖ್ಯ ಲೋಕಾಯುಕ್ತರಾಗಿ ನಿಯೋಜನೆಗೊಂಡಿದ್ದರು. ಆ ಅವಧಿಯಲ್ಲಿ ಅವರ ಮೂಗಿನಡಿಯಲ್ಲಿಯೇ ಅವರ ಮಗ ಮತ್ತು ಕರ್ನಾಟಕ ಲೋಕಾಯುಕ್ತದ ಹಲವು ಭ್ರಷ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಲೂಟಿ, ವಂಚನೆ ಮತ್ತು ಸುಲಿಗೆಯಲ್ಲಿ ತೊಡಗಿದ್ದರು. ಇದು ಭಾಸ್ಕರ ರಾಯನಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮಗನ ಮತ್ತವರ ಸಹವರ್ತಿಗಳ ಸುಲಿಗೆ ಕಾರ್ಯಕ್ರಮಕ್ಕೆ ತಮ್ಮ ಕಚೇರಿಯನ್ನೇ ಅಡ್ಡಾ ಮಾಡಿಕೊಳ್ಳಲು ಬಿಟ್ಟಿದ್ದರು ಎನ್ನುವುದು ಆತನ ಮೇಲಿರುವ ಗಂಭೀರ ಆರೋಪ. ಆದರೆ ಆಗಿನ ಬೆಂಗಳೂರು ನಗರ ಜಿಲ್ಲೆಯ ಲೋಕಾಯುಕ್ತ SP ಆಗಿದ್ದ ಸೋನಿಯಾ ನಾರಂಗ್‌ರವರು ಈ ವಿಚಾರವಾಗಿ ತಮ್ಮ ಸಂಸ್ಥೆಯ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿ ಆಗ ಇಡೀ ಹಗರಣವೇ ಬಯಲಾಯಿತು. ತದನಂತರ ಭ್ರಷ್ಟ ಲೋಕಾಯುಕ್ತ ಭಾಸ್ಕರ್ ರಾವ್ ವಿರುದ್ಧ ಮತ್ತು ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ವಿರುದ್ಧ ಬಹಳ ದೊಡ್ಡ ಮಟ್ಟದ ಹೋರಾಟಗಳಾಗಿ, ಜನಾಭಿಪ್ರಾಯ ರೂಪುಗೊಂಡು ಅಂತಿಮವಾಗಿ ಭಾಸ್ಕರ ರಾಯ 2015ರ ಜುಲೈನಲ್ಲಿ ರಾಜೀನಾಮೆ ಕೊಟ್ಟು ಲೋಕಾಯುಕ್ತ ಸಂಸ್ಥೆಯಿಂದ ಹೊರ ಹೋಗಬೇಕಾಯಿತು. ಲೋಕಾಯುಕ್ತದ ಭ್ರಷ್ಟರ ವಿರುದ್ಧ ಆಗ ದಾಖಲಾದ ದೂರುಗಳು ಈಗಲೂ ನ್ಯಾಯಾಲಯದಲ್ಲಿ ಕುಂಟುತ್ತಾ ತೆವಳುತ್ತಾ ಸಾಗುತ್ತಿವೆ ಮತ್ತು ಭ್ರಷ್ಟರು ಈಗಲೂ ರಾಜಾರೋಷವಾಗಿ ಬದುಕುತ್ತಿದ್ದಾರೆ’ ಎನ್ನುವುದು ನಮ್ಮ ಒಟ್ಟಾರೆ ವ್ಯವಸ್ಥೆ ಯಾವ ಮಟ್ಟಕ್ಕೆ ಭ್ರಷ್ಟರಿಗೆ ಬೆಂಬಲವಾಗಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ.
ಲೋಕಾಯುಕ್ತ ಸಂಸ್ಥೆಯಲ್ಲಿಯ ಭ್ರಷ್ಟಾಚಾರದ ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಆಗಿನ ಮುಖ್ಯಮಂತ್ರಿ ಆಗಿದ್ದ ಮತ್ತು ಹಾಲಿ ಮುಖ್ಯಮಂತ್ರಿಯೂ ಆಗಿರುವಂತಹ ಸಿದ್ದರಾಮಯ್ಯನವರು ಉದ್ದೇಶಪೂರ್ವಕವಾಗಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿ ಎನ್ನುವಂತಹ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿ,ತದನಂತರ ಎಸ್.ಆರ್. ಹಿರೇಮಠ ಮತ್ತಿತರರ ಹಲವಾರು ವರ್ಷಗಳ ಸುದೀರ್ಘ ಕಾನೂನು ಹೋರಾಟಗಳ ಕಾರಣದಿಂದಾಗಿ ಕರ್ನಾಟಕ ಉಚ್ಚ ನ್ಯಾಯಾಲಯವು, ಸಿದ್ದರಾಮಯ್ಯ ಸ್ಥಾಪಿಸಿದ್ದ ನಾಮಕಾವಸ್ತೆ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಿ, 2022 ಆಗಸ್ಟ್‌ನಲ್ಲಿ ಲೋಕಾಯುಕ್ತ ಸಂಸ್ಥೆಗೆ ಅದರ ಹಿಂದಿನ ಸ್ವಾಯತ್ತತೆ ಮತ್ತು ಕಾರ್ಯವ್ಯಾಪ್ತಿಯನ್ನು ನಿಗದಿಪಡಿಸಿ ಪುನರ್‌ಸ್ಥಾಪನೆ ಮಾಡಿತು.
ಆದರೆ ದುರದೃಷ್ಟವಶಾತ್ ಲೋಕಾಯುಕ್ತ ಸಂಸ್ಥೆಯ ಕುರಿತು ರಾಜ್ಯದ ಜನರಲ್ಲಿ ಈಗಲೂ ಸಂಶಯದ ಮಿಶ್ರ ಭಾವಗಳು ಮುಂದುವರೆಯುತ್ತಿವೆ. ರಾಜ್ಯಾದ್ಯಂತ ಜನಸಾಮಾನ್ಯರಲ್ಲಿ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಇರುವ ಗಂಭೀರ ಆರೋಪ ಏನೆಂದರೆ, “ಲೋಕಾಯುಕ್ತಕ್ಕೆ ದೂರು ಕೊಟ್ಟರೆ ಅದು ಅವರಿಗೆ ಗಿರಾಕಿಗಳನ್ನು ಹಿಡಿದುಕೊಟ್ಟಂತೆ” ಎನ್ನುವುದು. ಹೀಗೆ ಲೋಕಾಯುಕ್ತದಲ್ಲಿಯೂ ಭ್ರಷ್ಟಾಚಾರ ಇದೆ ಎನ್ನುವುದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಬೆಂಗಳೂರು ನಗರ ಎರಡನೇ SP ಆಗಿದ್ದಂತಹ ಶ್ರೀನಾಥ್ ಜೋಶಿ ಮತ್ತು ಆತನ ಏಜೆಂಟಾಗಿ ಕೆಲಸ ಮಾಡುತ್ತಿದ್ದ ನಿಂಗಪ್ಪ ಎನ್ನುವಂತಹ ಮಾಜಿ ಪೊಲೀಸ್ ಮಾಡಿದ್ದಾರೆ ಎನ್ನುವ ಮಹಾ ಸುಲಿಗೆ ಅಭಿಯಾನ, ರಾಜ್ಯದ ನೂರಾರು ಸರ್ಕಾರಿ ಅಧಿಕಾರಿಗಳನ್ನು ಈ ನಿಂಗಪ್ಪನ ಮೂಲಕ ಲೋಕಾಯುಕ್ತದ ಉನ್ನತ ಅಧಿಕಾರಿಗಳು ಹೆದರಿಸಿ, ಬೆದರಿಸಿ, ಪ್ರತಿ ತಿಂಗಳೂ ಕೋಟ್ಯಾಂತರ ರೂಪಾಯಿ ಹಫ್ತಾ ವಸೂಲಿ ಮಾಡುತ್ತಿದ್ದರು ಎಂದು ಲೋಕಾಯುಕ್ತದ ಮೂಲಗಳನ್ನು ಆಧರಿಸಿದ ಮಾಧ್ಯಮ ವರದಿಗಳು ಇತ್ತೀಚೆಗೆ ಹೇಳುತ್ತಿವೆ.
ಇದು ಕೇವಲ ಬೆಂಗಳೂರಿನ ಒಂದು ಕಡೆ ಆಗುತ್ತಿರುವಂತದ್ದಲ್ಲ, ಜಿಲ್ಲಾಮಟ್ಟದ ಲೋಕಾಯುಕ್ತ ಕಛೇರಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಭ್ರಷ್ಟ ಅಧಿಕಾರಿಯೊಬ್ಬ ಲಂಚ ಕೇಳುತ್ತಿದ್ದಾನೆ ಎಂದು ಲೋಕಾಯುಕ್ತಕ್ಕೆ ದೂರು ಒಯ್ದರೆ ಕೆಲವು ಭ್ರಷ್ಟ ಲೋಕಾಯುಕ್ತ ಅಧಿಕಾರಿಗಳು ಲಂಚಕೋರನಿಗೇ ಮಾಹಿತಿ ನೀಡಿ ಅವನನ್ನು ಬಚಾವು ಮಾಡುತ್ತಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರೇ ಹೇಳಿಕೊಳ್ಳುವುದು ಸರ್ವೆಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಲೋಪದ ವಿಚಾರವಾಗಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದರೆ, ಅದನ್ನು ಸರಿಯಾಗಿ ವಿಚಾರಣೆ ಮಾಡದೆ ತನ್ನ ಲೋಪವನ್ನು ಸಮರ್ಥಿಸಿಕೊಂಡು ಸರ್ಕಾರಿ ಅಧಿಕಾರಿ ಕೊಡುವ ಸಮರ್ಥನೆ ಉತ್ತರವನ್ನೇ ಸತ್ಯವೆಂದು ಭಾವಿಸಿ ಯಾವುದೇ ಹೆಚ್ಚುವರಿ ತನಿಖೆ ಅಥವ ವಿಚಾರಣೆ ನಡೆಸದೆ ಅಂತಹ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ ಎನ್ನುವಂತಹ ಆರೋಪಗಳೂ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಇಡೀ ಲೋಕಾಯುಕ್ತ ಸಂಸ್ಥೆಯ ಶುದ್ದೀಕರಣವಾಗಬೇಕಾದದ್ದು ಇಂದಿನ ಜರೂರು. “Justice must not only be done, but must also be seen to be done”, ಎನ್ನುವ ಮಾತಿನಂತೆ ಲೋಕಾಯುಕ್ತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಬರಬೇಕು ಹಾಗೂ ಲೋಕಾಯುಕ್ತದ ಉತ್ತಮ ಕಾರ್ಯಗಳು ಜನರಿಗೆ ಕಾಣಬೇಕು. ಲೋಕಾಯುಕ್ತದಲ್ಲಿ ಈಗಿರುವ ಅನೇಕ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಹಿಂದಿನ ಸಹೋದ್ಯೋಗಿಗಳ ಅಥವ ಅವರ ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆ ಮಾಡುವ ಮತ್ತು ದಾಳಿ ಮಾಡುವ ಯಾವುದೇ ಧೈರ್ಯ, ಧೈರ್ಯ ಇಲ್ಲ ಎನ್ನುವುದು ಎದ್ದು ಕಾಣಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಅನೇಕ ಪೊಲೀಸ್ ಅಧಿಕಾರಿಗಳು ಲೋಕಾಯುಕ್ತ ದಾಳಿಯಲ್ಲಿ ತಪ್ಪಿಸಿಕೊಂಡು ಹೋಗಿರುವುದೂ ಸೇರಿದಂತೆ ಅವರ ಮೇಲಿನ ಪ್ರಕರಣಗಳು ಯಾವುದೇ ತಾರ್ಕಿಕ ಅಂತ್ಯ ಕಾಣದಿರುವುದರ ಪ್ರಕರಣಗಳಲ್ಲಿ ಕಾಣಬಹುದು.
ಹಾಗಾಗಿ, ಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು, ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಥವ ಕ್ರಮ ಜರುಗಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟ ಮತ್ತು ಪ್ರಭಾವಿಗಳಿಂದ ರಕ್ಷೆಸಬೇಕು ಮತ್ತು ಲೋಕಾಯುಕ್ತವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಏನೆಲ್ಲಾ ಸುಧಾರಣೆಗಳನ್ನು ಸಂಸ್ಥೆಯಲ್ಲಿ ತರಬೇಕಿದೆಯೋ ಅವೆಲ್ಲವನ್ನೂ ಈ ಕೂಡಲೇ ಮಾಡಲು ಮುಂದಾಗಬೇಕೆಂದು ನಾವು ಈ ಮೂಲಕ ಮಾನ್ಯ ಲೋಕಾಯುಕ್ತರಲ್ಲಿ ಮನವಿ ಮಾಡುತ್ತಿದ್ದೇವೆ. ಇದನ್ನು ಖಾತ್ರಿಯಾಗಿ ಮಾಡಿದರೆ ಮಾತ್ರ ಲೋಕಾಯುಕ್ತ ಸಂಸ್ಥೆಯ ಘನತೆ ಹೆಚ್ಚುತ್ತದೆ ಹಾಗೂ ರಾಜ್ಯದ ಜನತೆಗೆ ದಕ್ಷ ಪ್ರಾಮಾಣಿಕ, ಜನಪರ ಆಡಳಿತ ನೀಡುವ ನಿಟ್ಟಿನಲ್ಲಿಯ ಅದರ ಪಾತ್ರವನ್ನು ನಿಭಾಯಿಸಿದಂತಾಗುತ್ತದೆ ಎನ್ನುವುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ.ಈ ಸಂಧರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗದಗ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸದ್ಯಸರು ಉಪಸ್ಥಿತರಿದ್ದರು