ಕರುನಾಡು ಘರ್ಜನೆ ಸುದ್ದಿ : ಬೆಂಗಳೂರು, ಜು.3; ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಕಾನೂನುಬದ್ಧಗೊಳಿಸಿಲ್ಲ. ಕೇಂದ್ರದ ಮಾರ್ಗಸೂಚಿ ಸಲಹೆ ರೂಪದಲ್ಲಿದ್ದು, ಇದು ಕಾನೂನು ಸ್ವರೂಪ ಪಡೆದುಕೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಕೇಂದ್ರ ಕಡ್ಡಾಯವಾಗಿ ನಿರ್ದೇಶನ ನೀಡಿದೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ನಟರಾಜ್ ಶರ್ಮಾ, ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ಕೇಂದ್ರದ ಮಾರ್ಗಸೂಚಿ ಸಲಹೆ ಸ್ವರೂಪದಲ್ಲಿದೆ. ಇದು ಕೇಂದ್ರದ ಕಾನೂನು ಎಂಬುದು ಸರಿಯಲ್ಲ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಹೆಚ್ಚುತ್ತಿದ್ದು, ವಾಸ್ತವ ಪರಿಸ್ಥಿತಿಯನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಸಾರಿಗೆ ಸಂಘಟನೆಗಳು ಸಜ್ಜಾಗಿವೆ ಎಂದರು.
ಕೇಂದ್ರದ ಮಾರ್ಗಸೂಚಿಯೂ ಸಹ ಲೋಪಗಳಿಂದ ಕೂಡಿದೆ. ಶುಲ್ಕರಚನೆಯಲ್ಲಿ ಮಾರ್ಗಸೂಚಿ ಅಂಶಗಳು ಗೊಂದಲಕಾರಿಯಾಗಿವೆ. ಮೂಲ ದರಕ್ಕಿಂತ ಶೇ 50 ರಷ್ಟು ಮತ್ತು ಒತ್ತಡದ ಸಮಯದಲ್ಲಿ ಎರಡು ಪಟ್ಟು ಶುಲ್ಕ ವಿಧಿಸಲು ಸಂಗ್ರಹಕಾರರಿಗೆ ಅವಕಾಶ ನೀಡಿರುವುದು ಸರಿಯಲ್ಲ. ಇದು 1988 ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 67 ಹಾಗೂ ಸ್ಪರ್ಧಾ ಕಾಯ್ದೆ 2002 ರ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಮಾರ್ಗಸೂಚಿಯನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸಿದರೆ ಒತ್ತಡದ ಸಮಯದಲ್ಲಿ ಮೂಲ ಬೆಲೆಯ ದುಪ್ಪಟ್ಟು ಹಣವನ್ನು ವಸೂಲಿ ಮಾಡಿದರೆ ಪ್ರಯಾಣಿಕರಿಗೆ ತೀವ್ರ ಹೊರೆಯಾಗಲಿದೆ. ಇದು ಆರ್ಥಿಕ ಸಂಕಷ್ಟ ಮತ್ತು ಜೀವನೋಪಾಯದ ಮೇಲೂ ಪರಿಣಾಮ ಬೀರಲಿದೆ. ಇದಲ್ಲದೇ ಬೈಕ್ ಟ್ಯಾಕ್ಸಿ ಗಳನ್ನು ಕಾನೂನು ಬದ್ಧವಾಗಿ ನಿಯಂತ್ರಣ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಇಷ್ಟಕ್ಕೂ ರಾಜ್ಯ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿಲ್ಲ. ಪೀಕ್ ಅವರ್ ನಲ್ಲಿ ದುಪ್ಪಟ್ಟು ದರ ವಿಧಿಸಲು ಹೊರಡಿಸಿರುವ ಮಾರ್ಗಸೂಚಿಯನ್ನು ವಾಪಸ್ ಪಡೆಯಬೇಕು. ಜೊತೆಗೆ ಇದೀಗ ತಲೆ ದೋರಿರುವ ಗೊಂದಲಗಳನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಆದರ್ಶ ಮಂಜುನಾಥ್, ಶಬರಿನಾಥ್, ರವಿಕುಮಾರ್, ಪ್ರತಿಮಾ, ರಾಜು ಕನ್ನಡಿಗ ಮತ್ತು ಸಂಚಾರಿ ಸತೀಶ್ ಉಪಸ್ಥಿತರಿದ್ದರು.