ಕರುನಾಡು ಘರ್ಜನೆ ಸುದ್ದಿ ತುಮಕೂರು : ಪ್ರೀತಿಸಿದ ಹುಡುಗಿಯನ್ನು ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಹುಡುಗಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ನಡೆದಿದೆ. ಮಂಜುನಾಥ್(32) ಮೃತ ದುರ್ದೈವಿ.ಮೃತ ಮಂಜುನಾಥ್ ಟಿಟಿ ವಾಹನದ ಚಾಲಕನಾಗಿದ್ದನು. ಕೆಲ ತಿಂಗಳಿಂದ ಮಂಜುನಾಥ್ ಮನೆ ಪಕ್ಕದ ಮನೆ ಹುಡುಗಿಯನ್ನ ಪ್ರೀತಿ ಮಾಡುತ್ತಿದ್ದ. ಇಬ್ಬರು ಪರಸ್ಪರ ಮದುವೆಯಾಗಲು ಒಪ್ಪಿದ್ದರು. ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನ ಮಂಜುನಾಥ್ ಕೇಳಿದ್ದನಂತೆ. ಮಂಜುನಾಥ್‌ಗೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು ಎಂದು ಆರೋಪಿಸಲಾಗಿದೆ. ಯುವತಿ ಇನ್ನೂ ಅಪ್ರಾಪ್ತೆ ಇರುವ ಹಿನ್ನೆಲೆಯಲ್ಲಿ ಮದುವೆ ಮಾಡಿಕೊಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.
ನಿನ್ನೆ ತಡರಾತ್ರಿ ಯುವತಿ ಮನೆ ಮುಂದೆಯೇ ಮಂಜುನಾಥ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು,
ಘಟನಾ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.